ಕೈವಲ್ಯ

ಜೀವ ಸಂಸಾರದಿಂದ ಪಡೆಯುವ ಬಿಡುಗಡೆಗೆ ಸಾಮಾನ್ಯವಾಗಿ ಈ ಹೆಸರಿದೆ. ಐಕ್ಯ, ಮೋಕ್ಷ, ನಿರ್ವಾಣ ಇವು ಪರ್ಯಾಯ ನಾಮಗಳು. ಕೈವಲ್ಯದ ಅರ್ಥ ಒಂದೊಂದು ದರ್ಶನದಲ್ಲಿ ಒಂದೊಂದು ಬಗೆಯಾಗಿದೆ. ವೇದಾಂತ ಶಾಖೆಯಾದ ಅದ್ವೈತದಲ್ಲಿ ಕೈವಲ್ಯವೆಂದರೆ ಆತ್ಮ-ಬ್ರಹ್ಮರ ಐಕ್ಯ. ಆತ್ಮ ಮಾಯಾ ಸಂಬಂಧದಿಂದ ಕೇವಲತೆಯನ್ನು ಹೊಂದಿ ಬ್ರಹ್ಮವಾಗುವುದು. ದ್ವೈತದಲ್ಲಿ ಕೈವಲ್ಯ ಅಥವಾ ಮೋಕ್ಷವೆಂದರೆ ಆತ್ಮ ಆತ್ಮವಾಗಿಯೇ ಉಳಿದು ವಿಷ್ಣುಸಾಲೋಕ್ಯ, ಸಾಮೀಪ್ಯಗಳನ್ನು ಹೊಂದಿ ಅನುಗುಣವಾದ ಆನಂದವನ್ನು ಅನುಭವಿಸುವುದು. ಸಾಂಖ್ಯದರ್ಶನದ ಪ್ರಕಾರ ಪ್ರಕೃತಿ ಸಂಪರ್ಕವನ್ನು ಪುರುಷ ಕಳೆದುಕೊಳ್ಳುವುದೇ ಕೈವಲ್ಯ. ಪಾತಂಜಲಯೋಗದರ್ಶನದ ಅರ್ಥ ಇದೇ. ಅವೈದಿಕ ಧರ್ಮವಾದ ಜೈನಸಿದ್ಧಾಂತದ ಪ್ರಕಾರ ಆತ್ಮ ಅಜೀವರೂಪವಾದ ಕರ್ಮದಿಂದ ಬಿಡುಗಡೆ ಹೊಂದುವುದೇ ಕೈವಲ್ಯ. ಬೌದ್ಧರಲ್ಲಿ ಕೈವಲ್ಯ ಅಥವಾ ಬಿಡುಗಡೆಯೆಂದರೆ ನಿರ್ವಾಣ ಹೊಂದುವಿಕೆ ಎಂದರ್ಥ.										(ಕೆ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ